ನೆಲಹಾಸು -
	ನೀರಾವರಿಗಾಗಿ ನದಿಗೆ ಅಡ್ಡಕಟ್ಟಿರುವ ಅಣೆಕಟ್ಟಿನ ಕೆಳಭಾಗದಲ್ಲಿ ಒರಟುಕಲ್ಲುಗಳಿಂದ ಕಟ್ಟಿ ಸಂದುಗಳಲ್ಲಿ ಗಾರೆಯನ್ನು ತುಂಬಿರುವ ರಚನೆ. ಅಣೆಕಟ್ಟಿನ ಮೇಲಿನಿಂದ ಪ್ರವಾಹ ನೆಲಹಾಸಿನ ಮೇಲೆ ಉರುಳಿದಾಗ ಉತ್ಪತ್ತಿಯಾದ ಹೆಚ್ಚಿನ ವೇಗ ನೆಲಹಾಸಿನಿಂದ ದೊರೆವ ಆಫಾತದಿಂದ ಕ್ರಮೇಣ ನಾಶವಾಗುತ್ತದೆ. ನೆಲಹಾಸು ಇಲ್ಲದೆ ಇದ್ದರೆ ಈ ಪ್ರವಾಹ ಅಣೆಕಟ್ಟಿನ ಹಿಂಭಾಗದ ನದಿಯ ತಳವನ್ನು ಕೊರೆಯುತ್ತಿತ್ತು. ಈಗ ನೀರು ಇಳಿಜಾರಾದ ನೆಲಹಾಸಿನ ಮೇಲೆ ಉರುಳಿದಾಗ ನಿಧಾನವಾಗಿ ಹೊಳೆಯನ್ನು ಸೇರುತ್ತದೆ. ಅದಕ್ಕಾಗಿ ನೆಲಹಾಸು ಸಾಕಷ್ಟು ಅಗಲವಾಗಿದ್ದು ಅದರ ಮೇಲೆ ಉರುಳುವ ನೀರಿನ ವೇಗವನ್ನು ತಡೆಯುವಂತೆ ಇರಬೇಕು. ಇದಲ್ಲದೆ ಅಣೆಕಟ್ಟಿನ ಮೇಲುಭಾಗದಲ್ಲಿಯೂ ನದಿಯ ತಳ ಕೊರೆಯದಂತೆ ಸಿಮೆಂಟ್ ಮತ್ತು ಕಲ್ಲಿನಿಂದ ಕಟ್ಟಿದ ಇನ್ನೊಂದು ನೆಲಹಾಸು ಅವಶ್ಯವಾಗುತ್ತದೆ. ಇಂಥ ಕೊರೆತಗಳು ನದಿಯಲ್ಲಿನ ಅಡ್ಡಪ್ರವಾಹಗಳಿಂದ ಉಂಟಾಗುತ್ತವೆ. ಇವನ್ನು ನಿವಾರಿಸಲು ಅಣೆಕಟ್ಟಿನ ಉದ್ದಕ್ಕೆ ಸಮಾಂತರವಾಗಿ ಯಾವ ಪ್ರವಾಹವೂ ಹರಿಯದಂತೆ ನೋಡಿಕೊಳ್ಳಬೇಕು. ಏಕೆಂದರೆ ಇಂಥ ಪ್ರವಾಹಗಳು ಸುಳಿಗಳನ್ನು ಉಂಟು ಮಾಡಿ ನದಿಯ ತಳವನ್ನು ಆಳವಾಗಿ ಕೊರೆಯುತ್ತವೆ. ಈ ಸುಳಿಗಳನ್ನು ತಪ್ಪಿಸಲು ನೆಲಹಾಸು ನೆರವಾಗುತ್ತದೆ.
(ಎಚ್.ಸಿ.ಕೆ.)
      (ಪರಿಷ್ಕರಣೆ: ಎಂ.ಜಿ.ಶ್ರೀನಿವಾಸನ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ